ದೇವರಾಯ 2

ವಿಜಯನಗರದ ಸಂಗಮ ವಂಶದ ದೊರೆ (1424 - 1446) ವಿಜಯರಾಯನ ಹಿರಿಯ ಮಗ. ಇವನಿಗೆ ಅಭಿನವ ವೀರದೇವರಾಯ, ಪ್ರತಾಪದೇವರಾಯ, ಪ್ರೌಢದೇವರಾಯ ಎಂಬ ಹೆಸರುಗಳೂ ಇವೆ. ಇಮ್ಮಡಿ ದೇವರಾಯ ತನ್ನ ತಂದೆಯ ಆಳ್ವಿಕೆಯ ಸಮಯದಲ್ಲೇ ರಾಜ್ಯದ ಆಡಳಿತ ಸೂತ್ರ ವಹಿಸಿಕೊಂಡಿದ್ದ. ಆದ್ದರಿಂದ ಅವನ ಆಳ್ವಿಕೆ 1422 ರಲ್ಲೇ ಪ್ರಾರಂಭವಾಯಿತೆಂಬುದು ಹಲವು ವಿದ್ವಾಂಸರ ಮತ.

ಪ್ರೌಢದೇವರಾಯ ಆಳ್ವಿಕೆಯ ಪ್ರಾರಂಭದಲ್ಲಿ ವಿಜಯನಗರದ ಪಶ್ಚಿಮದ ಆರಗ ಪ್ರಾಂತ್ಯದಲ್ಲಿ ಬೇಡನಾಯಕನನೊಬ್ಬನ ನೇತೃತ್ವದಲ್ಲಿ ದಂಗೆಯೊಂದು ಎದ್ದಿತು. ಈತ ಅದನ್ನು ಅಡಗಿಸಿದ. ಇವನು ಮೂರು ಸಾರಿ ಬಹಮನಿ ರಾಜ್ಯದ ವಿರುದ್ಧ ಯುದ್ಧ ಮಾಡಿದ. ಒಂದನೆಯ ಬಹಮನೀ ಯುದ್ಧ ನಡೆದದ್ದು 1422 - 23 ರಲ್ಲಿ. ಬಹಮನೀ ಸುಲ್ತಾನ 1ನೆಯ ಅಹಮದ್ ಶಾಹ ತನ್ನ ಹಿಂದಿನ ಸುಲ್ತಾನನ ಕಾಲದಲ್ಲಿ ಉಂಟಾಗಿದ್ದ ಪರಾಭವದ ಸೇಡು ತೀರಿಸಿಕೊಳ್ಳಲು ವಿಜಯನಗರದ ವಿರುದ್ಧ ಈ ಯುದ್ಧ ಹೂಡಿದ್ದ. ಪ್ರಾರಂಭದಲ್ಲಿ ಎರಡೂ ಪಕ್ಷಗಳವರೂ ನಷ್ಟ ಅನುಭವಿಸಿದರೂ ಅಂತಿಮವಾಗಿ ವಿಜಯನಗರಕ್ಕೆ  ಜಯ ಲಭಿಸಿತು. ಯುದ್ಧ ನಡೆಯುತ್ತಿದ್ದಾಗಲೇ ಬಹಮನೀ ಸುಲ್ತಾನ ತನ್ನ ರಾಜಧಾನಿಯನ್ನು ಗುಲ್ಬರ್ಗದಿಂದ ಬೀದರಿಗೆ ಬದಲಾಯಿಸಬೇಕಾಯಿತು. (1423) ಯುದ್ಧ ಮುಗಿದ ಮೇಲೆ ದೇವರಾಯನ ಗಮನ ಆಂಧ್ರದತ್ತ ಹರಿಯಿತು. ಒರಿಸ್ಸದ ಗಜಪತಿ ವಂಶದ ದೊರೆ ಭಾನುದೇವ ತನ್ನ ರಾಜ್ಯವನ್ನು ವಿಸ್ತರಿಸಲು ರಾಜಮಹೇಂದ್ರಿಯ ಮೇಲೆ ದಂಡೆತ್ತಿ ನಡೆದಿದ್ದ. ಅವನಿಗೆ ವೇಲಮರ ಬೆಂಬಲವಿತ್ತು. ರಾಜಮಹೇಂದ್ರಿಯ ದೊರೆ ಶರಣಾಗತನಾಗಿ ಭಾನುದೇವನ ಸಾಮಂತನಾದ. ಅನಂತರ ಭಾನುದೇವ ಕೊಂಡವೀಡು ರಾಜ್ಯವನ್ನು ಆಕ್ರಮಿಸಿಕೊಂಡ. ಹೀಗೆ ತನ್ನ ಸಾಮಂತರು ಅನುಭವಿಸುತ್ತಿದ್ದ ಪರಾಭವವನ್ನು ಸಹಿಸಲಾರದ ದೇವರಾಯ ಆಂಧ್ರದತ್ತ ನುಗ್ಗಿ ಭಾನುದೇವನನ್ನೂ ವೇಲಮರನ್ನೂ ಸೋಲಿಸಿ ಕೊಂಡವೀಡು ಪ್ರದೇಶವನ್ನು ವಿಜಯನಗರ ಸಾಮ್ರಾಜ್ಯಕ್ಕೆ ಸೇರಿಸಕೊಂಡು ರಾಜಮಹೇಂದ್ರಿಯನ್ನು ಅದರ ಹಿಂದಿನ ರೆಡ್ಡಿಗೆ ಪುನಃ ವಹಿಸಿಕೊಟ್ಟ. (1428). ಭಾನುದೇವನ ಅನಂತರ ಬಂದ ಕಪಿಲೇಂದ್ರ ಮತ್ತೆ ರಾಜಮಹೇಂದ್ರಿಯನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸಿದರೂ ವಿಜಯನಗರದ ಮತ್ತು ರೆಡ್ಡಿಯ ಸೈನ್ಯಗಳು ಅವನನ್ನು ಹಿಮ್ಮೆಟ್ಟಿಸಿದುವು. (1436)

ಎರಡನೆಯ ಬಹುಮನಿ ಯುದ್ಧ 1435 - 36 ರಲ್ಲಿ ನಡೆಯಿತು. ಮುದ್ಗಲ್ ಮತ್ತು ರಾಯಚೂರು ಕೋಟೆಗಳನ್ನು ಸ್ವಾಧೀನಪಡಿಸಿಕೊಳ್ಳುವ ಸಲುವಾಗಿ ಬಹುಮನೀ ಸುಲ್ತಾನ ಅಲಾ-ಉದ್-ದೀನನೊಡನೆ ನಡೆದ ಈ ಯುದ್ಧದಲ್ಲೂ ದೇವರಾಯ ಜಯ ಹೊಂದಿದ. ಬಹಮನೀಯರೊಡನೆ ಮೂರನೆಯ ಸಲ ಯುದ್ಧ ನಡೆದದ್ದು 1443-44 ರಲ್ಲಿ. 1443 ರಲ್ಲಿ ದೇವರಾಯನನ್ನು ಕೊಲ್ಲುವ ಪಿತೂರಿಯೊಂದು ರಾಜಮನೆತನದಲ್ಲಿ ನಡೆಯಿತು. ಅದು ವಿಫಲವಾದರೂ ಆಗಿನ ಅಸ್ತವ್ಯಸ್ತ ಪರಿಸ್ಥಿತಿಯ ಲಾಭ ಪಡೆಯುವ ಉದ್ದೇಶದಿಂದ ಬಹಮನೀ ಸುಲ್ತಾನ ದೇವರಾಯನನ್ನು ಪೊಗದಿಕೊಡಬೇಕೆಂದು ತಗಾದೆ ಮಾಡಿದ. ದೇವರಾಯ ಒಪ್ಪಲಿಲ್ಲ. ಯುದ್ಧ ನಡೆಯಿತು. ಬಹಮನೀ ಸುಲ್ತಾನ ಮತ್ತೆ ಪರಾಭವಗೊಂಡ.

ವಿಜಯನಗರ ರಾಜ್ಯಕ್ಕೂ ಸಿಂಹಳದ ತುಂಡರಸರಿಗೂ ಒಳ್ಳೆಯ ಸಂಬಂಧವೇನೂ ಇರಲಿಲ್ಲ. ಆದ್ದರಿಂದ ರಾಜ್ಯದ ದಕ್ಷಿಣ ಭಾಗಗಳ ಭದ್ರತೆಗಾಗಿ ಸಿಂಹಳದ ಅರಸರನ್ನು ಹಿಡಿತದಲ್ಲಿಟ್ಟುಕೊಳ್ಳುವುದು ಅಗತ್ಯವಾಗಿತ್ತು. ಇದಕ್ಕಾಗಿ ದೇವರಾಯ ತನ್ನ ದಳಪತಿ ಲಕ್ಕಣ್ಣ ದಂಡನಾಯಕನ ನೇತೃತ್ವದಲ್ಲಿ ಸಿಂಹಳಕ್ಕೆ ಸೈನ್ಯ ಕಳಿಸಿದ. ಲಕ್ಕಣ್ಣ ದಂಡನಾಯಕನ ನೌಕಾದಂಡಯಾತ್ರೆ ಫಲಿಸಿತು. ಸಿಂಹಳದ ರಾಜ ಪೊಗದಿ ಕೊಡುವ ಹಾಗೆ ಆಯಿತು. ಈ ವಿಜಯಕ್ಕಾಗಿ ಲಕ್ಕಣ್ಣನಿಗೆ ದೇವರಾಯ ದಕ್ಷಿಣ ಸಮುದ್ರಾಧಿಪತಿ ಎಂದು ಬಿರುದನ್ನು ನೀಡಿದ. ಇದೇ ಸಮಯದಲ್ಲಿ ಗಜಪತಿದೊರೆ ಕಪಿಲೇಂದ್ರ ರಾಜಮಹೇಂದ್ರಿಯ ರೆಡ್ಡಿ ನಾಯಕನ ಮೇಲೆ ಯುದ್ಧ ಹೂಡಿದ. ಗಜಪತಿ ದೊರೆಯನ್ನು ದೇವರಾಯ ಸೋಲಿಸಿದ (ಸು. 1423). 

ದೇವರಾಯ ಕರ್ನಾಟಕದ ಮತ್ತು ದಕ್ಷಿಣ ಭಾರತದ ಉನ್ನತ ರಾಜರುಗಳಲ್ಲಿ ಒಬ್ಬನಾಗಿದ್ದ. ಇವನ ಆಳ್ವಿಕೆಯಲ್ಲಿ ವಿಜಯನಗರ ಸಾಮ್ರಾಜ್ಯ ಬಹಳ ಮಟ್ಟಿಗೆ ವಿಸ್ತಾರವಾಯಿತು. ಇವನ ಕಾಲದಲ್ಲಿ ವಿಜಯನಗರ ಸಾಮ್ರಾಜ್ಯ ಗೋವ, ರಾಜಮಹೇಂದ್ರಿಗಳಿಂದ ಹಿಡಿದು ರಾಮೇಶ್ವರದ ವರೆಗೂ ಹಬ್ಬಿತ್ತು. ಕ್ವಿಲಾನ್, ಪುಲಿಕಾಡು, ಸಿಂಹಳ, ಬರ್ಮದ ಪೆನು ಮತ್ತು ಕೆನೆಸ್ಸೆರಿಮ್ ರಾಜರು ಇವನಿಗೆ ಕಪ್ಪ ಒಪ್ಪಿಸುತ್ತಿದ್ದರೆಂದು ನೂನಿಜ್ ತಿಳಿಸುತ್ತಾನೆ. ಇವನು ಯುದ್ಧ ನಿಪುಣನಾಗಿದ್ದ. ಏಕಕಾಲದಲ್ಲಿ ಹಲವು ರಣರಂಗಗಳಲ್ಲಿ ಸೈನಿಕ ಕಾರ್ಯಾಚರಣೆಯನ್ನು ನಿರ್ವಹಿಸುತ್ತಿದ್ದ.

ಇವನೊಬ್ಬ ರಾಜನೀತಿ ನಿಪುಣನೂ ಆಗಿದ್ದ. ಇವನ ಆಳ್ವಿಕೆಯ ಕಾಲದಲ್ಲಿ ವಿಜಯನಗರ ಸಾಮ್ರಾಜ್ಯ ಅತ್ಯುನ್ನತ ಸ್ಥಿತಿಯಲ್ಲಿತ್ತು. ರಾಜ್ಯದಲ್ಲಿ ಶಾಂತಿ ಏರ್ಪಟ್ಟಿತ್ತು. ಪ್ರಜೆಗಳಲ್ಲಿ ತೃಪ್ತಿ ನೆಲಸಿತ್ತು. ಸಾಮಾಜಿಕ ಸೌಹಾರ್ದವಿತ್ತು. ಕೃಷಿ ಅಭಿವೃದ್ಧಿ ಹೊಂದಿತು. ವ್ಯಾಪಾರಗಳು ಬೆಳೆದುವು. ವಿಜಯನಗರ ಸಾಮ್ರಾಜ್ಯದಲ್ಲಿ 300 ರೇವು ಪಟ್ಟಣಗಳಿದ್ದುವೆಂದು ವಿಜಯನಗರದಲ್ಲಿದ್ದ ಪರ್ಷಿಯ ರಾಯಭಾರಿ ಅಬ್ದುಲ್ ರಜಾಕ್ ಹೇಳಿದ್ದಾನೆ. ಧಾರ್ಮಿಕ ವಿಚಾರದಲ್ಲಿ ರಾಜ ಅನುಸರಿಸುತ್ತಿದ್ದ ಉದಾರನೀತಿಯೇ ಸಾಮಾಜಿಕ ಸೌಹಾರ್ದ ಹಾಗೂ ಒಗ್ಗಟ್ಟಿಗೆ ಕಾರಣ. ಇವನು ಮುಸ್ಲಿಮರನ್ನೂ ಸೈನ್ಯಕ್ಕೆ ಸೇರಿಸಿಕೊಂಡಿದ್ದ. ರಾಜಧಾನಿಯಲ್ಲಿ ಇವನು ಒಂದು ಮಸೀದಿಯನ್ನು ಕಟ್ಟಿಸಿದ್ದನಲ್ಲದೆ, ಕೊರಾನಿನ ಒಂದು ಪ್ರತಿಯನ್ನು ಸಿಂಹಾಸನದ ಮೇಲೆ ಇಟ್ಟಿದ್ದ.

ವಿಜಯನಗರಕ್ಕೆ ಭೇಟಿ ಕೊಟ್ಟ ಇಟಲಿಯ ಪ್ರವಾಸಿ ನಿಕೊಲೋ ಕಾಂಟೇ, ಪರ್ಷಿಯನ್ ರಾಯಭಾರಿ ಅಬ್ದುಲ್ ರಜಾಕ್, ಇವರು ವಿಜಯನಗರ ವರ್ಣನೆಯನ್ನೂ ಅದರ ವೈಭವವನ್ನೂ ತಮ್ಮ ಬರವಣಿಗೆಯಲ್ಲಿ ಒಕ್ಕಣಿಸಿದ್ದಾರೆ. ಅಲ್ಲಿಯ ರಾಜಸ್ಥಾನ ವಿದ್ವಾಂಸರಿಗೂ ಕಲೆಗಾರರಿಗೂ ಕವಿಗಳಿಗೂ ಆಶ್ರಯವಾಗಿತ್ತು. ಶ್ರೀಮಂತರೂ ಸಾಮಂತರೂ ಆಸ್ಥಾನಿಕರೂ ಅಧಿಕಾರಿಗಳೂ ರಾಯಭಾರಿಗಳೂ ನಾನಾ ದೇಶಗಳಿಂದ ಬಂದ ಪ್ರಖ್ಯಾತ ವ್ಯಕ್ತಿಗಳೂ ಅಲ್ಲಿ ನೆರೆಯುತ್ತಿದ್ದರು. ಕವಿ ಕಲಾವಿದ ವಿದ್ವಜ್ಜನರಿಗೆ ದೇವರಾಯ ಆಶ್ರಯದಾತನಾಗಿದ್ದನಲ್ಲದೆ ಸ್ವತಃ ವಿದ್ವಾಂಸನಾಗಿದ್ದ. ವೀರಶೈವ ಮತ ತತ್ವಗಳಿಗೆ ಇವನ ಕಾಲದಲ್ಲಿ ಪ್ರೋತ್ಸಾಹ ದೊರಕಿತು. ವೀರಶೈವ, ಜೈನ ಮತ್ತು ಬ್ರಾಹ್ಮಣ ಸಾಹಿತ್ಯಗಳು ಅಭಿವೃದ್ಧಿ ಹೊಂದಿದುವು. ಈ ಕಾಲದ ಕನ್ನಡ ಕವಿಗಳಲ್ಲಿ ಚಾಮರಸ ಮತ್ತು ಕುಮಾರವ್ಯಾಸ ಶ್ರೇಷ್ಠರು. ಹಜಾರ ರಾಮಸ್ವಾಮಿ ದೇವಸ್ಥಾನವೇ ಮುಂತಾದ ಕಟ್ಟಡಗಳಿಂದ ದೇವರಾಯ ವಿಜಯನಗರವನ್ನು ಅಂದಗೊಳಿಸಿದ. 

ದೇವರಾಯನಿಗೆ ಪೊನ್ನಲ ದೇವಿ ಮತ್ತು ಭೀಮಾದೇವಿ ಎಂಬ ಪತ್ನಿಯರಿದ್ದರು. ಮಲ್ಲಿಕಾರ್ಜುನ ಇವನ ಮಗ. ಇವನ ದಂಡನಾಯಕರ ಪೈಕಿ ಲಕ್ಕಣ್ಣ ಮತ್ತು ಮಾದಣ್ಣ ಮುಖ್ಯರು. ಇನ್ನೊಬ್ಬ ದಂಡನಾಯಕ ಜಕ್ಕಣ್ಣ. ವೀರಶೈವ ಕವಿ. ಇಮ್ಮಡಿ ದೇವರಾಯ 1446 ರ ಮೇ 26 ರಂದು ಮೃತನಾದ. 							(ಎ.ವಿ.ವಿ.; ಎಂ.ಕೆ.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ